ಮೈಸೂರಿನಲ್ಲಿ ನಡೆಯುವ ನವರಾತ್ರಿ ಮತ್ತು ದಸರಾ ಉತ್ಸವದ ಸಂದರ್ಭದಲ್ಲೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ನವರಾತ್ರಿ ಬೊಂಬೆಗಳ ಸಂಭ್ರಮ ಪ್ರಾರಂಭವಾಗುತ್ತದೆ. ಈ ಭಾಗದಲ್ಲಿ ನವರಾತ್ರಿ ಸಮೀಪವಾಗುತ್ತಿದಂತೆ ಮನೆಗಳಲ್ಲಿರುವ ಬೊಂಬೆಗಳನ್ನು ಶುಭ್ರಗೊಳಿಸುವ, ಸಾಕಷ್ಟು ಹೊಸ ಬೊಂಬೆಗಳನ್ನು ಅಂಗಡಿಗಳಿಂದ ತರುವ ಕಾರ್ಯ ನಡೆಯುತ್ತದೆ. ಅದರೊಂದಿಗೆ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಮತ್ತು ಆರಾಧನೆ ನಡೆಯುತ್ತದೆ. ಇನ್ನು ಕೆಲ ಮನೆಗಳಲ್ಲಿ ಕೆಲವರು ದೇವಿ ಕೂಡಿಸುತ್ತಾರೆ. ಹಾಗೆ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಗೊಂಬೆಗಳನ್ನು ಕೂಡಿಸುವ ಆಚರಣೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಸರಾದಲ್ಲಿ ದೇವಿಯ ಆರಾಧಾನೆಗೆ ಮಾತ್ರ ಸೀಮಿತವಾಗದೆ ನಮ್ಮ ನಾಡಿನ ಗತವೈಭವ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸಲಾಗುತ್ತದೆ. ಹಾಗಾಗಿ ಬೆಂಗಳೂರಿನ ಕಾವೇರಿ ಲೇಔಟ್ ನಾಗರಬಾವಿಯಲ್ಲಿರುವ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವ ಪ್ರಭಾವತಿ ಅವರ ಮನೆಯಲ್ಲಿ ದಸರಾ ಬೊಂಬೆ ಈ ಬಾರಿ ವಿಶೇಷವಾಗಿದ್ದು, ಮೈಸೂರು ದಸರಾ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ.