ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುತ್ತಿರುವಾಗಲೇ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಗೆ ತೆರಳಿ ಅವರನ್ನು ಬಂಧಿಸಿದ್ದರು. ನಂತರ ಕೆಲವು ದಿನಗಳ ಕಾಲ ಸಂತೋಷ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನು ಸಿಕ್ಕ ಬಳಿಕ ಅವರು ಮತ್ತೆ ದೊಡ್ಮನೆಯೊಳಗೆ ಪ್ರವೇಶ ಪಡೆದರು. ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದರ ಬಗ್ಗೆ ದೊಡ್ಮನೆಯೊಳಗಿನ ಸ್ಪರ್ಧಿಗಳಿಗೆ ಮಾಹಿತಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ವೀಕ್ಷಕರಲ್ಲಿದೆ. ಆ ಬಗ್ಗೆ ರಕ್ಷಕ್ ಬುಲೆಟ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ವರ್ತೂರು ಸಂತು ಸೀಕ್ರೆಟ್ ರೂಮ್ನಲ್ಲಿ ಇದ್ದರು ಅಂತ ನನಗೆ ಅನಿಸುತ್ತಿತ್ತು. ಆದರೆ ನಾನು ಎಲಿಮಿನೇಟ್ ಆಗಿ ಹೊರಬಂದ ಬಳಿಕವೇ ನನಗೆ ಅವರ ಅರೆಸ್ಟ್ ಬಗ್ಗೆ ಗೊತ್ತಾಯಿತು. ಅವರನ್ನು ಕರೆದುಕೊಂಡು ಹೋಗುವ ವಿಡಿಯೋಗಳನ್ನು ನೋಡಿ ನನಗೆ ಬೇಸರವಾಯಿತು’ ಎಂದು ರಕ್ಷಕ್ ಬುಲೆಟ್ ಹೇಳಿದ್ದಾರೆ.