ಕೊಲೆ ಪ್ರಕರಣದ ಆರೋಪಿಯಾಗಿ ದರ್ಶನ್ ಅವರು ಜೈಲು ಸೇರಿರುವುದರಿಂದ ಅವರ ಕುಟುಂಬದವರಿಗೆ ತೀವ್ರ ನೋವಾಗಿದೆ. ಇಂದು (ಜುಲೈ 1) ದರ್ಶನ್ ತಾಯಿ ಮೀನಾ, ಸಹೋದರ ದಿನಕರ್ ತೂಗುದೀಪ, ಮಗ ವಿನೀಶ್, ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಬಂದಿದ್ದಾರೆ. ದರ್ಶನ್ ಅವರನ್ನು ನೋಡಿ ತಾಯಿ ಮೀನಾ ಅವರು ಕಣ್ಣೀರು ಹಾಕಿದ್ದಾರೆ. ತಾಯಿಯನ್ನು ನೋಡುತ್ತಿದ್ದಂತೆಯೇ ದರ್ಶನ್ ಕೂಡ ಗಳಗಳನೆ ಅತ್ತಿದ್ದಾರೆ. ಬಳಿಕ ದರ್ಶನ್ ಅವರು ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಸಿ, ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಸಾಯಿಸಿದ ಆರೋಪ ದರ್ಶನ್ ಮೇಲಿದೆ. ನಟಿ ಪವಿತ್ರಾ ಗೌಡ ಹಾಗೂ ಸಹಚರರ ಮೇಲೂ ಆರೋಪ ಇದೆ. ಎಲ್ಲ ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.