ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಸುಮಲತಾ ಹೇಳಿದ ಕಿವಿಮಾತು ಏನು?

ನಟ ದರ್ಶನ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಈಗ ದರ್ಶನ್​ ಮೇಲೆ ಗಂಭೀರ ಆರೋಪ ಬಂದಿದ್ದರೂ ಕೂಡ ಅವರನ್ನು ಕೆಲವು ಅಭಿಮಾನಿಗಳು ಬಿಟ್ಟುಕೊಡುತ್ತಿಲ್ಲ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್​ ಎ2 ಆಗಿದ್ದಾರೆ. ಆದರೆ ದರ್ಶನ್​ ಮಾಡಿದ್ದು ಸರಿ ಇದೆ ಎಂದು ಕೆಲವು ಫ್ಯಾನ್ಸ್​ ಹೇಳಿಕೆ ನೀಡುತ್ತಿದ್ದಾರೆ. ಅಂಥವರ ಬಗ್ಗೆ ನಟಿ ಸುಮಲತಾ ಅಂಬರೀಷ್​ ಮಾತನಾಡಿದ್ದಾರೆ. ‘ದರ್ಶನ್​ ಅವರ ಅಭಿಮಾನಿಗಳಲ್ಲಿ ನಾವು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ಯಾರಿಗೂ ನೋವಾಗುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ಗಂಭೀರವಾದ ಪ್ರಕರಣ ಆದ್ದರಿಂದ ನಾವು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ವರ್ತಿಸಬೇಕು’ ಎಂದು ಸುಮಲತಾ ಅಂಬರೀಷ್​ ಹೇಳಿದ್ದಾರೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕಾಗಿ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಅಪಹರಿಸಿ, ಹತ್ಯೆ ಮಾಡಿದ ಆರೋಪ ದರ್ಶನ್​ ಹಾಗೂ ಸಹಚರರ ಮೇಲಿದೆ. ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ತನಕ ವಿಸ್ತರಿಸಲಾಗಿದೆ.