ಬೆಂಗಳೂರು, ಸೆ.5: ನಗರದಲ್ಲಿರುವ ಅರಮನೆ ವೀಕ್ಷಣೆಗೆ ಬಂದಿದ್ದ ವಿದೇಶಿ ಪ್ರಜೆಗಳಿಗೆ ಆಟೋ ಚಾಲಕರೊಬ್ಬರು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿದೇಶಿ ಪ್ರಜೆಗಳ ಗಮನ ಬೇರೆಡೆ ಸೆಳೆಯುತ್ತಲೇ 500 ರೂ. ಬಾಡಿಗೆ ಪಡೆದು 100 ರೂ. ಕೊಟ್ಟಿದ್ದೀರಿ ಎಂದು ಹೇಳಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾರೆ. ಇದರ ವಿಡಿಯೋವನ್ನು ಮೊಹಮ್ಮದ್ ಫಿಜ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಆಟೋದಲ್ಲಿ ಹೋಗದಂತೆ ಸೂಚಿಸಲಾಗಿದೆ. ವಿಡಿಯೋದಲ್ಲಿ ಇರುವಂತೆ, ಪ್ರವಾಸಿಗರಿಂದ 500 ರೂ. ಪಡೆದು ಅದನ್ನು ಶರ್ಟ್ ಕೈ ತೋಳಿನ ಒಳಗೆ ಅಡಗಿಸಿಟ್ಟು ಮತ್ತೊಂದು ಕೈಯಲ್ಲಿದ್ದ 100 ರೂ. ತೋರಿಸಿ ಮತ್ತಷ್ಟು ಹಣ ಕೇಳುವುದನ್ನು ನೋಡಬಹುದು. ಭಾರತದ ಕರೆನ್ಸಿ ಬಗ್ಗೆ ಅಷ್ಟಾಗಿ ಅರವಿಲ್ಲದ ವಿದೇಶಿ ಪ್ರಜೆ, ತಾನು 100 ರೂ. ಕೊಟ್ಟಿರಬಹುದು ಎಂದು ತಿಳಿದು ಮತ್ತೆ ಹಣ ನೀಡಿದ್ದಾರೆ.