‘ಪುಷ್ಪ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದು ಮಾತ್ರವಲ್ಲದೇ ನಟ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಈ ಸಿನಿಮಾದಲ್ಲಿನ ಅಭಿನಯದಿಂದ ಅವರ ಖ್ಯಾತಿ ಹೆಚ್ಚಾಗಿದೆ. ದೆಹಲಿಯಲ್ಲಿ ಇಂದು (ಅ.17) ನಡೆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಲ್ಲು ಅರ್ಜುನ್ ಅವರು ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ್ದಾರೆ. ಇದು ಅವರ ಪಾಲಿಗೆ ಹೆಮ್ಮೆಯ ಕ್ಷಣ. ಅಭಿಮಾನಿಗಳು, ಆಪ್ತರು ಅಲ್ಲು ಅರ್ಜುನ್ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ವೇಳೆ ನಟಿ ಆಲಿಯಾ ಭಟ್, ನಟ ಆರ್. ಮಾಧವನ್ ಸೇರಿದಂತೆ ಅನೇಕರು ಅಲ್ಲು ಅರ್ಜುನ್ ಅವರನ್ನು ಅಭಿನಂದಿಸಿದ್ದಾರೆ. ಸದ್ಯ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದರಿಂದ ಅವರ ಮೇಲಿನ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ.