ಇಷ್ಟು ದಿನ ಲೋಕಸಭಾ ಎಲೆಕ್ಷನ್ ಮತ್ತು ಐಪಿಎಲ್ ಅಬ್ಬರ ಜಾಸ್ತಿ ಇದ್ದಿದ್ದರಿಂದ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಈಗ ‘ಮಾರ್ಟಿನ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್ 11ರಂದು ‘ಮಾರ್ಟಿನ್’ ತೆರೆಕಾಣಲಿದೆ. ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಅಕ್ಟೋಬರ್ 10ರಂದು ಬಿಡುಗಡೆ ಆಗಲಿದೆ. ಇದರಿಂದ ಡೇಟ್ ಕ್ಲ್ಯಾಶ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ನಿರ್ದೇಶನ ಎ.ಪಿ. ಅರ್ಜುನ್ ಅವರು ಉತ್ತರ ನೀಡಿದ್ದಾರೆ. ‘ವಿಜಯದಶಮಿ ಎಂಬುದು ಕನ್ನಡ ನಾಡಿನ ಅದ್ಭುತವಾದ ಹಬ್ಬ. ಈ ಹಬ್ಬಕ್ಕೆ ನಾವು ಏನಾದರೂ ಕೊಡಲೇಬೇಕು. ಆಗೆಲ್ಲ ಕನ್ನಡದಲ್ಲೇ ಮೂರು-ನಾಲ್ಕು ಸಿನಿಮಾ ರಿಲೀಸ್ ಆಗುತ್ತಿತ್ತು. ಈಗ ನಮ್ಮ ವಿಜಯದಶಮಿಗೆ ನಮ್ಮದೊಂದು ಸಿನಿಮಾ ರಿಲೀಸ್ ಮಾಡದಿದ್ದರೆ ಹೇಗೆ? ಕ್ಲ್ಯಾಶ್ ಎನ್ನೋದಕ್ಕಿಂತಲೂ ನಮ್ಮ ತಂಡದಿಂದ ನಮ್ಮ ಸಿನಿಮಾ ಬರುತ್ತಿದೆ, ಅವರ ತಂಡದಿಂದ ಅವರ ಸಿನಿಮಾ ಬರುತ್ತಿದೆ. ಎರಡು ಸಿನಿಮಾಗಳನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಇರುವ ಚಿತ್ರಮಂದಿರಗಳು ಭಾರತದಲ್ಲಿ ಇವೆ. ಎರಡೂ ಸಿನಿಮಾವನ್ನು ವಿಜಯದಶಮಿ ಸಮಯದಲ್ಲಿ ನೋಡುವಂತಹ ಜನರು ಕೂಡ ನಮ್ಮ ದೇಶದಲ್ಲಿ ಇದ್ದಾರೆ’ ಎಂದು ಎ.ಪಿ. ಅರ್ಜುನ್ ಹೇಳಿದ್ದಾರೆ.