ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ನಾಲ್ಕು ವಾರಗಳ ಕಾಲ ಪೈಪೋಟಿ ನೀಡಿದ ಅವರು ಈಗ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ ಬಳಿಕ ‘ಟಿವಿ9 ಕನ್ನಡ’ ಜೊತೆ ಅವರು ಮಾತನಾಡಿದ್ದಾರೆ. ತಾವು ಬೇಗ ಎಲಿಮಿನೇಟ್ ಆಗಿದ್ದಕ್ಕೆ ಕಾರಣ ಏನಿರಬಹುದು ಎಂಬುದನ್ನು ಅವರು ಅವಲೋಕಿಸಿದ್ದಾರೆ. ‘ನಾನು ಚೆನ್ನಾಗಿ ಆಡಿದ್ದೇನೆ. ಬೇರೆಯವರ ರೀತಿ ಡ್ರಾಮಾ ಮಾಡಿಲ್ಲ. ಅವರ ವರ್ತನೆ ನನಗೆ ಅರ್ಥ ಆಯಿತು. ಇಲ್ಲಿಯವರೆಗೆ ನಾನು ಮುಖವಾಡ ಹಾಕಿಕೊಂಡು ಬದುಕಿಲ್ಲ, ಬದುಕೋದೂ ಇಲ್ಲ. ನೀನು ಟ್ರಿಗರ್ ಆಗು ಅಂತ ಕೆಲವರು ಹೇಳಿದರು. ಆ ರೀತಿ ಮಾಡಲು ನನಗೆ ಹುಚ್ಚುನಾಯಿ ಕಚ್ಚಿಲ್ಲ. ಜನರಿಗೆ ಫೇಕ್ ಯಾವುದು ಎಂಬುದು ಗೊತ್ತಾಗುತ್ತದೆ. ಇದ್ದಷ್ಟು ದಿನ ನನಗೆ ಸಿಕ್ಕ ವೇದಿಕೆಯನ್ನು ನಾನು ಚೆನ್ನಾಗಿ ಉಪಯೋಗಿಸಿಕೊಂಡಿದ್ದೇನೆ’ ಎಂದು ರಕ್ಷಕ್ ಅವರು ಹೇಳಿದ್ದಾರೆ.