ಅಮೆರಿಕದಲ್ಲಿ ಜಮೀನು ಉಳುಮೆ ಮಾಡುವಾಗ ಚಿನ್ನದ ನಾಣ್ಯಗಳು ಪತ್ತೆ!

ಅದೃಷ್ಟ ಯಾರನ್ನು ಯಾವಾಗ ಹೇಗೆ ಅಪ್ಪಿಕೊಳ್ಳುತ್ತದೆ ಎಂಬುದು ಯಾರಿಗೂ ತಿಳಿದುಬರುವುದಿಲ್ಲ. ಶ್ರಮಜೀವಿ ಬಡವನನ್ನೂ ಲಕ್ಷಾಧಿಪತಿಯನ್ನಾಗಿ ಮಾಡಬಹುದು. ಇತ್ತೀಚೆಗಷ್ಟೇ ಇಂತಹದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ. ಹೊಲ ಉಳುಮೆ ಮಾಡುತ್ತಿದ್ದ ರೈತನೊಬ್ಬನ ನೇಗಿಲಿಗೆ ನೆಲದಲ್ಲಿ ಏನನ್ನೋ ಬಡಿದ ಹಾಗಿದೆ. ಯಾವುದೋ ಕಲ್ಲು ಅಡ್ಡಿಯಾಗಿದೆ ಎಂದು ಭಾವಿಸಿದ ರೈತ ಅದನ್ನು ತೆಗೆಯಲು ಯತ್ನಿಸಿದ್ದಾನೆ. ಆದರೆ ಅಲ್ಲಿ ಎತ್ತರದ ಪೆಟ್ಟಿಗೆ ಕಾಣಿಸಿದೆ. ಅದು ತುಂಬಾ ಭಾರವಾಗಿತ್ತು. ರೈತ ಅದನ್ನು ತೆರೆದು ಏನಿದೆ ಎಂದು ನೋಡಿದ್ದಾನೆ. ಆಗ ಪೆಟ್ಟಿಗೆಯಲ್ಲಿ ಚಿನ್ನ ಬೆಳ್ಳಿಯ ನಾಣ್ಯಗಳಿಂದ ತುಂಬಿರುವುದು ಕಂಡುಬಂದಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ಕೆಂಟುಕಿ ರಾಜ್ಯದ ರೈತ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಈ ನಾಣ್ಯಗಳ ಪೆಟ್ಟಿಗೆ ದೊರೆತಿದೆ. ಇದೀಗ ಅವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಎಲ್ಲಾ ನಾಣ್ಯಗಳು 1840-1863 ರ ಅವಧಿಗೆ ಸೇರಿದವು ಎಂದು ತಿಳಿದುಬಂದಿದೆ.