ರಕ್ಷಿತ್​ ಶೆಟ್ಟಿ-ರಾಜ್​ ಬಿ. ಶೆಟ್ಟಿ ನಡುವೆ ಸ್ಪರ್ಧೆ ಇದೆಯಾ? ಬಹಿರಂಗ ವೇದಿಕೆಯಲ್ಲಿ ‘ಟೋಬಿ’ ಹೀರೋ ಹೇಳಿದ್ದಿಷ್ಟು..

ಬಹುನಿರೀಕ್ಷಿತ ‘ಟೋಬಿ’ ಸಿನಿಮಾದ ಟ್ರೇಲರ್​ ರಿಲೀಸ್​ ಮಾಡಲಾಗಿದೆ. ರಾಜ್​ ಬಿ. ಶೆಟ್ಟಿ ನಟನೆಯ ಈ ಸಿನಿಮಾದ ಟ್ರೇಲರ್​ ಲಾಂಚ್​ ಇವೆಂಟ್​ಗೆ ಅತಿಥಿಗಳಾಗಿ ರಕ್ಷಿತ್​ ಶೆಟ್ಟಿ, ರಿಷಬ್​ ಶೆಟ್ಟಿ ಮುಂತಾದವರು ಆಗಮಿಸಿದ್ದರು. ‘ಟೋಬಿ’ ಆಗಸ್ಟ್​ 25ಕ್ಕೆ ಬಿಡುಗಡೆ ಆಗುತ್ತಿದೆ. ರಕ್ಷಿತ್​ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್​ 1ರಂದು ಬಿಡುಗಡೆ ಆಗಲಿದೆ. ಹಾಗಿದ್ದರೂ ಕೂಡ ತಮ್ಮಿಬ್ಬರ ನಡುವೆ ಸ್ಪರ್ಧೆ ಇಲ್ಲ ಎಂದು ರಾಜ್​ ಬಿ. ಶೆಟ್ಟಿ ಹೇಳಿದ್ದಾರೆ. ‘ನಮ್ಮಲ್ಲಿ ಕಾಂಪಿಟೀಷನ್​ ಇಲ್ಲ. ಇದು ಸಹಯೋಗ. ರಕ್ಷಿತ್​ ಶೆಟ್ಟಿ ಅವರ ತುಂಬ ದೊಡ್ಡ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವರು ‘ಉಳಿದವರು ಕಂಡಂತೆ’ ಸಿನಿಮಾ ಮಾಡಿದ್ದರಿಂದಲೇ ನಾನು ಮಂಗಳೂರು ಕನ್ನಡದಲ್ಲಿ ಸಿನಿಮಾ ಮಾಡಲು ಶುರು ಮಾಡಿದೆ. ಅದನ್ನು ನಾನು ಯಾವತ್ತೂ ಅಲ್ಲಗಳೆಯಲ್ಲ. ಸ್ಫೂರ್ತಿಯಾಗಿ ತೆಗೆದುಕೊಂಡವರ ಜೊತೆ ಏನು ಸ್ಪರ್ಧೆ ಮಾಡುವುದು? ಇಲ್ಲಿ ಕಾಂಪಿಟೀಷನ್​ ಎಂಬ ಪ್ರಶ್ನೆಯೇ ಬರುವುದಿಲ್ಲ’ ಎಂದು ರಾಜ್​ ಬಿ. ಶೆಟ್ಟಿ ಹೇಳಿದ್ದಾರೆ.