‘ಆ ದಿನ ನನ್ನ ಆ್ಯಂಕರಿಂಗ್​ ಮುಗಿಯುತ್ತೆ’: ದೊಡ್ಡ ಜವಾಬ್ದಾರಿ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್​

ನಟ ಕಿಚ್ಚ ಸುದೀಪ್​ ಅವರು ಕಳೆದ 9 ಸೀಸನ್​ಗಳಲ್ಲಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ನಿರೂಪಣೆಗೆ ಸಜ್ಜಾಗಿದ್ದಾರೆ. ಅವರಿಗೆ ಈ ನಿರೂಪಣೆಯಲ್ಲಿ ದೊಡ್ಡ ಜವಾಬ್ದಾರಿ ಮತ್ತು ಸವಾಲು ಇದೆ. ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೇ ಇದ್ದರೆ ಆ ದಿನ ತಮ್ಮ ಆ್ಯಂಕರಿಂಗ್​ ಮುಗಿಯುತ್ತದೆ ಎಂದು ಅವರು ಹೇಳಿದ್ದಾರೆ. ‘ನನ್ನ ಮಾತಿನ ಮೇಲೆ ಹಿಡಿತ ಇಲ್ಲ ಎಂದರೆ... ನಾನು ಕೇಳಿದ ಪ್ರಶ್ನೆಗಳ ಮೇಲೆ ನನಗೆ ನಿಯಂತ್ರಣ ಇಲ್ಲ ಎಂದರೆ.. ಎಡವಟ್ಟಾಗಿ ನಾನು ಬೇರೆ ಪ್ರಶ್ನೆಗಳನ್ನು ಕೇಳಿದರೆ.. ಸ್ಪರ್ಧಿಗಳ ಹೇಳಿಕೆಯನ್ನು ನಾನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಅವರಿಗೆ ವೋಟ್ಸ್​ ಕಡಿಮೆ ಆಗುತ್ತದೆ. ಅವರ ವ್ಯಕ್ತಿತ್ವ ಬಿದ್ದು ಹೋಗುತ್ತದೆ. ಸ್ಪರ್ಧಿಗಳಿಗೆ ನನ್ನ ಮೇಲಿನ ನಂಬಿಕೆ ಹೊರಟು ಹೋಗುತ್ತದೆ. ಕ್ಷಮಿಸಿ ಸರ್.. ನಾನು ಹೇಳಿದ್ದು ಹಾಗಲ್ಲ. ನೀವು ಬೇಕಿದ್ದರೆ ನಿನ್ನೊಮ್ಮೆ ಚೆಕ್​ ಮಾಡಿ ಅಂತ ಸ್ಪರ್ಧಿಗಳು ನನಗೆ ಹೇಳುವಂತಹ ಪರಿಸ್ಥಿತಿ ಬಂದರೆ ಆ ದಿನ ನನ್ನ ಆ್ಯಂಕರಿಂಗ್​ ಅಂತ್ಯವಾಗುತ್ತದೆ. ಅದೃಷ್ಟವಶಾತ್​ ಇಂದಿನ ತನಕ ಅದು ಆಗಿಲ್ಲ. ಯಾಕೆಂದರೆ ನಾನು ಗಮನ ಕೊಟ್ಟು ಎಲ್ಲವನ್ನೂ ನೋಡುತ್ತೇನೆ. ನನ್ನ ದೃಷ್ಟಿಕೋನ ಮುಖ್ಯವಾಗುತ್ತದೆ. ಪಕ್ಷಪಾತ ಮಾಡುವ ಹಾಗಿಲ್ಲ’ ಎಂದು ಸುದೀಪ್​ ಹೇಳಿದ್ದಾರೆ.