‘ವಿನೋದ್​ಗೆ ನಾನು ಯಾವಾಗ್ಲೂ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಮೊದಲ ಪ್ರತಿಕ್ರಿಯೆ

ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ ಶಿವರಾಜ್​ಕುಮಾರ್​ ಅವರು ಕೂಡ ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಇನ್ನಿಲ್ಲ ಎಂಬ ವಿಷಯ ತಿಳಿದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಶಿವಣ್ಣ ಅವರು, ‘ಮನಸ್ಸಿಗೆ ಬಹಳ ಬೇಸರ ಆಗಿದೆ. ಅವರ ಅಗಲಿಕೆ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ. ನಾವೆಲ್ಲರೂ ಜೊತೆಯಲ್ಲಿ ಇದ್ದೇವೆ ಅಂತ ವಿನೋದ್​ಗೆ ನಾನು ಯಾವಾಗಲೂ ಹೇಳ್ತಾ ಇದ್ದೆ. ತಾಯಿಯನ್ನು ಅವರು ತುಂಬ ಹಚ್ಚಿಕೊಂಡಿದ್ದರು. ಅವರಿಬ್ಬರ ನಡುವಿನ ಬಾಂಧವ್ಯ ಬೇರೆ ರೀತಿಯಿತ್ತು. ವಿನೋದ್​ ಈಗ ಧೈರ್ಯ ತಂದುಕೊಳ್ಳಬೇಕು. ಅವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ವಿನೋದ್​ ಅವರನ್ನು ಮತ್ತೆ ಭೇಟಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.