ಶ್ರೀ ರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡುವ ಕನಸು ಕೈಗೂಡಿದೆ. ಕೋಟಿ ಕೋಟಿ ಭಕ್ತರ ರಾಮಸೇವೆ ಮಾಡುವ ಕನಸು ನೇರವೇರುವುದಕ್ಕೆ ಪೇಜಾವರ ಶ್ರೀಗಳು ಉದಾತ್ತ ಸೇವಾ ಮಾರ್ಗ ಸೂಚಿಸಿದ್ದಾರೆ. ಹತ್ತು ಲಕ್ಷ ರೂಪಾಯಿ ಮೌಲ್ಯದ ಸಮಾಜ ಸೇವೆ ಕಾರ್ಯಕೈಗೊಂಡ ದಾನಿಗಳಿಗೆ ಅಯೋಧ್ಯೆ ರಾಮನ ರಜತ ಕಲಶ ಅಭಿಷೇಕ ಸೇವೆ ಭಾಗ್ಯ ಲಭ್ಯವಾಗಲಿದೆ. ಹೌದು ಅಯೋಧ್ಯೆ ರಾಮನ ಸೇವೆ ನಡೆಸಿ ಕೃಪೆಗೆ ಪಾತ್ರವಾಗುವ ಕನಸು ಕೋಟ್ಯಾಂತರ ಭಕ್ತರಲ್ಲಿದೆ. ರಾಮಸೇವೆ ರೂಪದಲ್ಲಿ ಬಡವರ, ಗೋವುಗಳ ಸೇವೆ ಮಾಡುವಂತೆ ಪೇಜಾವರ ಶ್ರೀಗಳು ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ತಮ್ಮ ತಮ್ಮ ಊರಿನ ವಸತಿರಹಿತರಿಗೆ ಮನೆ ಕಟ್ಟಿಸಿಕೊಡಿ, ನೊಂದವರಿಗೆ, ಅನಾರೋಗ್ಯಪೀಡಿತ ಬಡ ಕುಟುಂಬಗಳಿಗೆ ನೆರವಾಗಿ ಎಂದು ಪೇಜಾವರ ಶ್ರೀ ಸಲಹೆ ನೀಡಿದ್ದಾರೆ.