‘ಈಗ ಮಾತಾಡಿದರೆ ರಾಜಕೀಯ ಆಗತ್ತೆ’: ಮತದಾನದ ಬಳಿಕ ರಿಷಬ್​ ಶೆಟ್ಟಿ ಪ್ರತಿಕ್ರಿಯೆ

ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ಇಂದು (ಮೇ 7) ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಕೂಡ ಮತದಾನ ಮಾಡಿದ್ದಾರೆ. ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ಉಡುಪಿಯಲ್ಲಿ ಮತ ಚಲಾಯಿಸಿದ್ದಾರೆ. ರಿಷಬ್​ ಶೆಟ್ಟಿ ಅವರು ಓದಿದ್ದು ಕುಂದಾಪುರದ ಕೆರಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ತಾವು ಓದಿದ ಶಾಲೆಯನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಅದೇ ಶಾಲೆಯಲ್ಲಿ ಇಂದು ಮತದಾನ ನಡೆದಿದ್ದು, ರಿಷಬ್​ ಶೆಟ್ಟಿ ಅವರು ಮಧ್ಯಾಹ್ನ ಬಂದು ಮತ ಹಾಕಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಮತದಾನ ನಮ್ಮ ಹಕ್ಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಅದನ್ನು ನಾನು ಮಾಡಿದ್ದೇನೆ. ಬೆಳಗ್ಗೆ ಜಾಸ್ತಿ ಜನ ಇರುತ್ತಾರೆ. ಮಧ್ಯಾಹ್ನ ಬಂದರೆ ಬೇಗ ಓಟ್​ ಹಾಕಿ ತೆರಳಬಹುದು ಅಂತ ಈ ಸಮಯದಲ್ಲಿ ಬಂದೆ. ಮುಂದಿನ ಸರ್ಕಾರದ ಮೇಲೆ ಇರುವ ನಿರೀಕ್ಷೆಗಳ ಬಗ್ಗೆ ಈಗ ಮಾತನಾಡಿದರೆ ಜಾಸ್ತಿ ರಾಜಕೀಯ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಮಾತನಾಡುವುದು ಬೇಡ’ ಎಂದು ಅವರು ಹೇಳಿದ್ದಾರೆ.