ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ಇಂದು (ಮೇ 7) ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಕೂಡ ಮತದಾನ ಮಾಡಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಉಡುಪಿಯಲ್ಲಿ ಮತ ಚಲಾಯಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಓದಿದ್ದು ಕುಂದಾಪುರದ ಕೆರಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ತಾವು ಓದಿದ ಶಾಲೆಯನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಅದೇ ಶಾಲೆಯಲ್ಲಿ ಇಂದು ಮತದಾನ ನಡೆದಿದ್ದು, ರಿಷಬ್ ಶೆಟ್ಟಿ ಅವರು ಮಧ್ಯಾಹ್ನ ಬಂದು ಮತ ಹಾಕಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಮತದಾನ ನಮ್ಮ ಹಕ್ಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಅದನ್ನು ನಾನು ಮಾಡಿದ್ದೇನೆ. ಬೆಳಗ್ಗೆ ಜಾಸ್ತಿ ಜನ ಇರುತ್ತಾರೆ. ಮಧ್ಯಾಹ್ನ ಬಂದರೆ ಬೇಗ ಓಟ್ ಹಾಕಿ ತೆರಳಬಹುದು ಅಂತ ಈ ಸಮಯದಲ್ಲಿ ಬಂದೆ. ಮುಂದಿನ ಸರ್ಕಾರದ ಮೇಲೆ ಇರುವ ನಿರೀಕ್ಷೆಗಳ ಬಗ್ಗೆ ಈಗ ಮಾತನಾಡಿದರೆ ಜಾಸ್ತಿ ರಾಜಕೀಯ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಮಾತನಾಡುವುದು ಬೇಡ’ ಎಂದು ಅವರು ಹೇಳಿದ್ದಾರೆ.