‘ನಂದಿನಿ’ ಉತ್ಪನ್ನಗಳಿಗೆ ಉಚಿತವಾಗಿ ಪ್ರಚಾರ ರಾಯಭಾರಿ ಆಗಿದ್ದಕ್ಕೆ ಶಿವಣ್ಣ ಹೇಳೋದೇನು?

ನಟ ಶಿವರಾಜ್​ಕುಮಾರ್​ ಅವರು ಅನೇಕ ಬ್ರ್ಯಾಂಡ್​ಗಳನ್ನು ಪ್ರಮೋಟ್​ ಮಾಡುತ್ತಾರೆ. ಅವುಗಳಿಂದ ಅವರಿಗೆ ಕೈತುಂಬ ಸಂಭಾವನೆ ಸಿಗುತ್ತದೆ. ಆದರೆ ‘ನಂದಿನಿ’ ಉತ್ಪನ್ನಗಳನ್ನು ಪ್ರಚಾರ ಮಾಡಲು ಅವರು ಯಾವುದೇ ರೀತಿಯಲ್ಲಿ ಸಂಭಾವನೆ ಪಡೆಯುತ್ತಿಲ್ಲ. ಉಚಿತವಾಗಿ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಈ ಬಗ್ಗೆ ‘ಟಿವಿ 9 ಕನ್ನಡ’ ಜೊತೆ ಶಿವಣ್ಣ ಮಾತನಾಡಿದ್ದಾರೆ. ‘ನಮ್ಮ ಕುಟುಂಬದ ಮೇಲೆ ಜನರು, ನಂದಿನಿ ಮತ್ತು ಸರ್ಕಾರದವರು ಇಟ್ಟಿರುವ ಪ್ರೀತಿಯನ್ನು ಇದು ತೋರಿಸುತ್ತದೆ. ನಂದಿನಿ ನಮ್ಮ ಹೆಮ್ಮೆ. ಅದಕ್ಕೆ ನಾವು ಉಚಿತವಾಗಿಯೇ ಪ್ರಚಾರ ಮಾಡುತ್ತೇವೆ. ಇದು ರೈತರಿಗೆ ಸಂಬಂಧಿಸಿದ್ದು. ಅದರಿಂದ ಏನನ್ನೂ ನಿರೀಕ್ಷಿಸಬಾರದು. ಒಳ್ಳೆಯ ಕೆಲಸಕ್ಕೆ ನಾವು ಸಹಕಾರ ಕೊಡುವುದು ಮುಖ್ಯವಾಗುತ್ತದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.