ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯಲ್ಲಿ ಮುಖ್ಯ ಆರೋಪಿಗಳಾಗಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಅವರು ಮಾಜಿ ಪತ್ನಿಯ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ವಿಚ್ಛೇದನ ಪಡೆಯುವಾಗ ಪವಿತ್ರಾ ಗೌಡ ಅವರನ್ನು ನಾನು ಕೊನೆಯ ಬಾರಿ ನೋಡಿದ್ದು ಕೋರ್ಟ್ನಲ್ಲಿ. ಕೊಲೆ ಪ್ರಕರಣದಲ್ಲಿ ಆಕೆಯ ಹೆಸರು ಬಂದಿದೆ. ಆದರೆ ಆಕೆ ಅಂಥ ವ್ಯಕ್ತಿ ಅಲ್ಲ. ಅವರು ತೆಗೆದುಕೊಂಡ ಕ್ರಮಕ್ಕೆ ನಾನು ಬೆಂಬಲ ನೀಡುತ್ತಿಲ್ಲ. ಅವರು ಆ ರೀತಿಯ ಮಹಿಳೆ ಅಲ್ಲ ಅಂತ ನಾನು ಹೇಳುತ್ತೇನೆ. ನಾನು ತುಂಬ ಪ್ರಾಕ್ಟಿಕಲ್ ಮನುಷ್ಯ. ಈ ಪ್ರಕರಣದಲ್ಲಿ ಮುಖ್ಯ ವಿಚಾರವನ್ನು ಜನರು ಬಿಟ್ಟಿದ್ದಾರೆ. ಯಾರು ಸಾಯಿಸಿದ್ದಾರೋ ಆ ಬಗ್ಗೆ ಕಾನೂನು ವಿಚಾರ ಮಾಡುತ್ತದೆ’ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.