ತಮಿಳಿನ ಖ್ಯಾತ ನಟ ಸಿದ್ದಾರ್ಥ್ ಅಭಿನಯದ ಹೊಸ ಸಿನಿಮಾ ಕನ್ನಡಕ್ಕೆ ‘ಚಿಕ್ಕು’ ಶೀರ್ಷಿಕೆಯಲ್ಲಿ ಡಬ್ ಆಗಿದೆ. ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 28) ಈ ಸಿನಿಮಾದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸದ್ಯ ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ಬಿಕ್ಕಟ್ಟು ನಿರ್ಮಾಣ ಆಗಿದೆ. ಈ ಸಂದರ್ಭದಲ್ಲಿ ತಮಿಳು ನಟನ ಸಿನಿಮಾವನ್ನು ಬೆಂಗಳೂರಿನಲ್ಲಿ ಪ್ರಚಾರ ಮಾಡಿದ್ದನ್ನು ಕನ್ನಡಪರ ಹೋರಾಟಗಾರರು ಖಂಡಿಸಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಹೋರಾಟಗಾರರು ನುಗ್ಗಿದ್ದಾರೆ. ‘ಬಿಗುವಿನ ವಾತಾವರಣ ಇರುವಾಗ ಕರ್ನಾಟಕದಲ್ಲಿ ತಮಿಳು ಸಿನಿಮಾಗೆ ಪ್ರಚಾರ ಮಾಡಿದರೆ ಘರ್ಷಣೆಗೆ ಕಾರಣ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದೂ ಅಲ್ಲದೇ, ‘ಇದು ಆದೇಶ ಅಲ್ಲ. ನಾವು ಮನವಿ ಮಾಡುತ್ತಿದ್ದೇವೆ. ದಯವಿಟ್ಟು ಇದನ್ನು ನಿಲ್ಲಿಸಿ’ ಎಂದಿದ್ದಕ್ಕೆ ಸಿದ್ದಾರ್ಥ್ ಅವರು ಸುದ್ದಿಗೋಷ್ಠಿಯಿಂದ ಅರ್ಧಕ್ಕೆ ಹೊರನಡೆದರು.