ಗೆದ್ರೆ ಪಕ್ಷದ್ದು, ಸೋತ್ರೆ ಇವಿಎಂನದ್ದು: ಒಮರ್ ಅಬ್ದುಲ್ಲಾ ವ್ಯಂಗ್ಯ

ಇವಿಎಂ ಮೆಷೀನ್ ಮೂಲಕ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆಗಾಗ್ಗೆ ಮಾಡುತ್ತಿರುವ ಆರೋಪಗಳಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟಾಂಟ್ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದಾಗ ಸಂಭ್ರಮಿಸುತ್ತೀರಿ. ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ದೂಷಿಸುತ್ತೀರಿ. ಇದು ಹೇಗೆ ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ‘ಇದೇ ಇವಿಎಂಗಳ ಮೂಲಕ ನೂರಕ್ಕೂ ಹೆಚ್ಚು ಮಂದಿ ನಿಮ್ಮ ಪಕ್ಷದಿಂದ ಸಂಸತ್​ಗೆ ಹೋಗುತ್ತಾರೆ. ಅದನ್ನು ನಿಮ್ಮ ಪಕ್ಷದ ಗೆಲುವು ಎಂದು ಸೆಲಬ್ರೇಟ್ ಮಾಡುತ್ತೀರಿ. ಕೆಲ ತಿಂಗಳ ಬಳಿಕ ಚುನಾವಣಾ ಫಲಿತಾಂಶ ನಿರೀಕ್ಷಿಸಿದಂತೆ ಬರದಿದ್ದರೆ ಇವಿಎಂಗಳತ್ತ ಬೊಟ್ಟು ಮಾಡುತ್ತೀರಿ’ ಎಂದು ಕಾಂಗ್ರೆಸ್ ಪಕ್ಷದ ಹೆಸರೆತ್ತದೆಯೇ ಒಮರ್ ಅಬ್ದುಲ್ಲಾ ವ್ಯಂಗ್ಯ ಮಾಡಿದ್ದಾರೆ. ತಾವು ಹಿಂದೆ ಸೋತಾಗ ಇವಿಎಂ ಬಗ್ಗೆ ಅಪಸ್ವರ ಎತ್ತಲಿಲ್ಲ. ನಂತರ ಗೆದ್ದೆ. ಜನರು ಒಮ್ಮೆ ಸೋಲಿಸುತ್ತಾರೆ, ಮಗದೊಮ್ಮೆ ಗೆಲ್ಲಿಸುತ್ತಾರೆ. ಅದು ಪ್ರಜಾತಂತ್ರ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥರೂ ಆದ ಅವರು ಪಿಟಿಐ ಸುದ್ದಿಸಂಸ್ಥೆಯ ಸಂದರ್ಶನದ ವೇಳೆ ಹೇಳಿದ್ದಾರೆ.