‘ಕಾಂತಾರ: ಚಾಪ್ಟರ್​ 1’ ಚಿತ್ರದ ಶೂಟಿಂಗ್​ ಬಗ್ಗೆ ಅಪ್​ಡೇಟ್​ ನೀಡಿದ ರಿಷಬ್​ ಶೆಟ್ಟಿ

‘ಕಾಂತಾರ’ ಸಿನಿಮಾ 2022ರ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಆ ಸಿನಿಮಾದಿಂದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶಸ್ಸು ಸಿಕ್ಕಿತ್ತು. ಈಗ ಅವರು ಇದರ ಪ್ರೀಕ್ವೆಲ್​, ಅಂದರೆ ‘ಕಾಂತಾರ: ಚಾಪ್ಟರ್​ 1’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಬೃಹತ್​ ಸೆಟ್ ಹಾಕಿ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ಸಿನಿಮಾದ ಬಗ್ಗೆ ಸಾಧ್ಯವಾದಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಕುರಿತು ಇಂದು (ಮೇ 7) ರಿಷಬ್​ ಶೆಟ್ಟಿ ಮಾತನಾಡಿದ್ದಾರೆ. ಕುಂದಾಪುರ ಕೆರಾಡಿ ಶಾಲೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಸಿನಿಮಾವನ್ನು ಜನರು ಥಿಯೇಟರ್​ನಲ್ಲಿ ನೋಡಿದರೆ ಒಳ್ಳೆಯದು. ಇತ್ತೀಚೆಗೆ ಜನರು ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡೋದಕ್ಕಿಂತ ನ್ಯೂಸ್​ನಲ್ಲಿ ನೋಡುತ್ತಾರೆ. ಕಥೆಯನ್ನೂ ಕೂಡ ನಾವು ಹೀಗೆಯೇ ಹೇಳಿದರೆ ಕಷ್ಟ ಆಗತ್ತೆ. ಅದೆಲ್ಲ ಅಫೀಷಿಯಲ್​ ಅನೌನ್ಸ್​ಮೆಂಟ್​ಗಳಲ್ಲಿ ಬಂದರೇ ಚಂದ. ಶೂಟಿಂಗ್​ ಶುರುವಾಗಿದೆ. ಅಂದುಕೊಂಡಂತೆಯೇ ಬಹಳ ಚೆನ್ನಾಗಿ ನಡೆಯುತ್ತಿದೆ. ತುಂಬ ದೊಡ್ಡ ತಂಡ ಕೆಲಸ ಮಾಡುತ್ತಿದೆ. ಮೊದಲಿಗಿಂತ ತುಂಬ ದೊಡ್ಡ ಜವಾಬ್ದಾರಿ ಇದೆ. ನಮ್ಮಂಥ ನಿರ್ದೇಶಕರಿಗೆ ಹೊಂಬಾಳೆ ಫಿಲ್ಮ್ಸ್​ ರೀತಿಯ ನಿರ್ಮಾಣ ಸಂಸ್ಥೆ ಸಿಕ್ಕಿದ್ದು ಪುಣ್ಯ. ಜನರ ನಿರೀಕ್ಷೆ ಬಗ್ಗೆ ನಾವು ಏನು ಹೇಳಲು ಸಾಧ್ಯ? ಅದು ಜನರೇ ನಿರ್ಧರಿಸುತ್ತಾರೆ. ‘ಕಾಂತಾರ’ ನೋಡಿದ ಪ್ರೇಕ್ಷಕರು ಒಳ್ಳೆಯ ಪ್ರತಿಕ್ರಿಯೆ ನೀಡಿದರು. ನಾವು ಈಗ ನಮ್ಮ ಸಿನಿಮಾ ಬಗ್ಗೆ ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಕೆಲಸದ ಮೂಲಕವೇ ಜನರಿಗೆ ತಿಳಿದರೆ ಒಳ್ಳೆಯದು’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.