ನಿರ್ಮಾಪಕ ಎಂ.ಎನ್. ಕುಮಾರ್ ಅವರು ನಟ ಕಿಚ್ಚ ಸುದೀಪ್ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುದೀಪ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದು, ಅದರ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ. ಇಂದು (ಆಗಸ್ಟ್ 10) ಸುದೀಪ್ ಅವರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿದ್ದಾರೆ. ಈ ವೇಳೆ ಏನೆಲ್ಲ ನಡೆಯಿತು ಎಂಬುದನ್ನು ಅವರ ಪರ ವಕೀಲರು ವಿವರಿಸಿದ್ದಾರೆ. ‘ಕಾನೂನಿನ ಪ್ರಕಾರ ಸುದೀಪ್ ಅವರು ಬಂದು ನ್ಯಾಯಾಲಯಕ್ಕೆ ತಮ್ಮ ಹೇಳಿಕೆ ನೀಡಿದ್ದಾರೆ. ಮಾನಹಾನಿ ಆಗಿದ್ದಕ್ಕೆ ಇರುವ ಸಾಕ್ಷಿಗಳನ್ನು ಅವರು ಸಲ್ಲಿಸಿದ್ದಾರೆ. ಸುದೀಪ್ ಅವರು ಕಾನೂನಿನ ಪ್ರಕಾರ ಏನೆಲ್ಲ ಕ್ರಮ ತೆಗೆದುಕೊಂಡಿದ್ದಾರೋ ಅದರ ಬಗ್ಗೆ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಈ ಹಂತದಲ್ಲಿ ರಾಜಿಗೆ ಅವಕಾಶ ಇಲ್ಲ. ಸದ್ಯಕ್ಕೆ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ವಕೀಲರು ಹೇಳಿದ್ದಾರೆ.