ಹುತಾತ್ಮ ಯೋಧರ ಪತ್ನಿಯರಿಗೆ, ಗಾಯಾಳು ಯೋಧರಿಗೆ ಸನ್ಮಾನ ಮಾಡಿ ಸೈ ಅನ್ನಿಸಿಕೊಂಡ ಯೋಧ

ಆತ ಓರ್ವ ದೇಶ ಕಾಯುವ ಯೋಧ. ದೇಶ ರಕ್ಷಣೆ ಜೊತೆಗೆ ದೇಶ ಭಕ್ತಿ, ಸಾಮಾಜಿಕ ಕಳಕಳಿ ಸಂದೇಶ ಸಾರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಆ ಯೋಧ ಇಂದು ಮದುವೆಯಾಗಿದ್ದು ಮದುವೆಯಲ್ಲೂ ವಿಶೇಷತೆ ಮೆರೆದಿದ್ದಾರೆ. ಹುತಾತ್ಮ ಯೋಧರ ಪತ್ನಿಯರಿಗೆ, ಕಾರ್ಗಿಲ್ ಯೋಧರಿಗೆ ಸನ್ಮಾನ ಮಾಡುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾನೆ. ಕಾರ್ಗಿಲ್ ಯುದ್ದದಲ್ಲಿ ವೀರೋಚಿತ ಹೋರಾಟ ಮಾಡಿ ಬದುಕಿರುವ ಯೋಧ, ಪುಲ್ವಾಮಾ, ಸಿಯಾಚಿನ್ ಸೇರಿದಂತೆ ವಿವಿಧ ಕಡೆಯಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರು. ಅವರೆಲ್ಲರಿಗೂ ಮಾಜಿ ಯೋಧರಿಂದ ಸನ್ಮಾನ. ಭಾರತ ಮಾತಾಕಿ ಜೈ, ಒಂದೇ ಮಾತರಂ, ಜೈ ಇಂಡಿಯನ್ ಆರ್ಮಿ, ಜೈ ಜವಾನ್ ಎಂಬ ಘೋಷಣೆ. ಅಂದ ಹಾಗೆ ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣ ಸಿದ್ದೇಶ್ವರ ದೇವಸ್ಥಾನದ ಮದುವೆ ಮಂಟಪದಲ್ಲಿ. ಮದುವೆ ಮಂಟಪದಲ್ಲಿ ಇದೆಲ್ಲ ಏನು ನಡೆಯುತ್ತಿದೆ ಅಂತ ಅನ್ನಿಸಬಹುದು. ಇದಕ್ಕೆಲ್ಲ ಕಾರಣ ಇಲ್ಲಿ ಮದುವೆ ಆಗುತ್ತಿರೋದು ಭಾರತೀಯ ಸೇನಾ ಯೋಧ ಸಂತೋಷ ಬಾವಿಕಟ್ಟಿ. ಬೀಳಗಿ ಮೂಲದ ಸಂತೋಷ ಬಾವಿಕಟ್ಟಿ ಭಾರತೀಯ ಸೇನಾಯೋಧನಾಗಿದ್ದು, ಇಂದು ಶೃತಿ ಎಂಬುವರ ಜೊತೆ ಹಸೆ ಮಣೆ ಏರಿದ್ದಾರೆ. ಒಬ್ಬ ಯೋಧನಾಗಿ ವಿಶೇಷವಾಗಿ ಮದುವೆಯಾಗಬೇಕು, ಅದು ಹುತಾತ್ಮ ಯೋಧರ ಪತ್ನಿಯರು, ಕಾರ್ಗಿಲ್ ಯುದ್ದದಲ್ಲಿ ವೀರಯುದ್ದ ಮಾಡಿ ಬದುಕಿದ ವೀರಯೋಧರಿಗೆ ಸನ್ಮಾನ ಮಾಡಬೇಕು. ಮಾಜಿ ಯೋಧರಿಂದ ಅವರೆಲ್ಲರಿಗೂ ಸನ್ಮಾನ ಮಾಡಿ ಎಲ್ಲ ಸೈನಿಕ ಕುಟುಂಬದ ಆಶೀರ್ವಾದ ಪಡೆಯಬೇಕು ಎಂಬುದು ಇವರ ಕನಸಾಗಿತ್ತು.