ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಬಿಕ್ಕಟ್ಟು ಉಂಟಾಗಿದೆ. ಕರುನಾಡಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವೇಳೆ ಚಿತ್ರೋದ್ಯಮದಿಂದಲೂ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ. ನೀರಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಭಾಗಿಯಾಗಲು ತಾವು ಸಿದ್ದ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ. ಇಂದು (ಸೆಪ್ಟೆಂಬರ್ 23) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ನಮ್ಮ ಜನರಿಗೆ ತೊಂದರೆ ಆದಾಗ ನಮ್ಮ ಚಿತ್ರರಂಗ ಮತ್ತು ಕುಟುಂಬ ಯಾವಾಗಲೂ ಮುಂದೆ ಬರುತ್ತದೆ. ಎಲೆಕ್ಷನ್ ಬಳಿಕ ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಇರುತ್ತೇವೆ. ನನ್ನ ಈ ಜೀವ 10 ವರ್ಷದಿಂದ ಕಷ್ಟಪಟ್ಟುಕೊಂಡು ಬದುಕುತ್ತಿದೆ. ಜೀವ ಕೊಡುವುದರಿಂದ ಕಾವೇರಿಗೆ ಒಳ್ಳೆಯದು ಆಗುತ್ತೆ ಎಂದರೆ ನನ್ನ ಜೀವ ಕೊಡಲು ನಾನು ಮತ್ತು ನಮ್ಮ ಕುಟುಂಬ ಸಿದ್ಧ’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.