‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಬಾನ ದಾರಿಯಲಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಗಣೇಶ್ ಜೊತೆ ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮುಂತಾದವರು ನಟಿಸಿದ್ದಾರೆ. ಪ್ರೀತಂ ಗುಬ್ಬಿ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್ ಅವರು ಈ ಚಿತ್ರದ ಟೈಟಲ್ ಬಗ್ಗೆ ಮಾತನಾಡಿದ್ದಾರೆ. ‘ಬಾನ ದಾರಿಯಲಿ..’ ಎಂದ ತಕ್ಷಣ ಎಲ್ಲರಿಗೂ ಪುನೀತ್ ರಾಜ್ಕುಮಾರ್ ಅವರ ‘ಭಾಗ್ಯವಂತ’ ಸಿನಿಮಾದ ಸಾಂಗ್ ನೆನಪಾಗುತ್ತದೆ. ಹಾಗಾದರೆ ಆ ಹಾಡಿಗೂ ತಮ್ಮ ಸಿನಿಮಾದ ಕಥೆಗೂ ಯಾವ ರೀತಿ ನಂಟು ಇದೆ ಎಂಬುದನ್ನು ಗಣೇಶ್ ವಿವರಿಸಿದ್ದಾರೆ. ‘ನನಗೆ ಮತ್ತು ಪ್ರೀತಂ ಗುಬ್ಬಿ ಅವರಿಗೆ ಈ ಸಿನಿಮಾ ತುಂಬ ಸ್ಪೆಷಲ್. ಇದು ಪ್ರೀತಿಯ ಬಗ್ಗೆ ಇರುವ ಸಿನಿಮಾ. ಯಾವ ಟೈಟಲ್ ಅಂತ ಯೋಚಿಸುತ್ತಿದ್ದಾಗ ಪುನೀತ್ ರಾಜ್ಕುಮಾರ್ ಅವರ ಹಾಡು ಕೇಳಿ ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆವು. ನಮ್ಮ ಸಿನಿಮಾ ನೋಡಿದ ಬಳಿಕ ಈ ಹಾಡಿನ ಕೆಲವು ಸಾಲುಗಳು ನಮ್ಮನ್ನು ಕಾಡುತ್ತವೆ’ ಎಂದು ಗಣೇಶ್ ಹೇಳಿದ್ದಾರೆ.