ಮುಂಜಾನೆ ಬಾಳೆ ಗೊನೆ ವ್ಯಾಪಾರದ ಕನಸಿನಲ್ಲಿ ಮಲಗಿದ್ದ ಕಾರ್ಮಿಕ ಆ ದಿನದ ಬೆಳಕನ್ನು ನೋಡಲೇ ಇಲ್ಲ. ರಾತ್ರಿ ವೇಳೆ ಲೋಡ್ ಇರುವ ಗಾಡಿಯಲ್ಲಿ ಸಂಚರಿಸುವುದು ಅಪಾಯಕಾರಿ ಎಂದು ವಿರಮಿಸಿದವರ ಮೇಲೆ ಯಮ ಕಿಂಕರನ ಸವಾರಿಯಾಗಿದೆ. ನೋಡು ನೋಡುತ್ತಿದ್ದ ರಕ್ತದ ಮಡುವಿನಲ್ಲಿ ಬಿದ್ದು ತನ್ನ ಸಹಕಾರ್ಮಿಕನ (Labourer) ಕಣ್ಣು ಮುಂದೆ ಪ್ರಾಣ ಬಿಟ್ಟಿದ್ದಾನೆ ಶಿವರಾಜ್. ಹೌದು ಆ ಸಿಸಿ ಕ್ಯಾಮೆರಾ ಫೋಟೇಜ್ ನೋಡಿದರೆ ಎಂಥವರಿಗೇ ಆಗಲಿ ಮೈ ಜುಮ್ ಅನ್ನಿಸುವುದು ಸಹಜ. ಶಿವಮೊಗ್ಗ (Shivamogga) ಜಿಲ್ಲೆಯಿಂದ ಬಾಳೆಗೊನೆಯನ್ನು ಹೊತ್ತು ಏಸ್ ಗಾಡಿಯಲ್ಲಿ ಉಡುಪಿಗೆ ಹೊರಟಿದ್ದವರು ರಾತ್ರಿಯ ಸಂಚಾರ ಬೇಡ ಎಂದು ಆಗುಂಬೆ ಸಮೀಪದ ಸೊಮೇಶ್ವರ ಪೆಟ್ರೋಲ್ ಬಂಕ್ ನಲ್ಲಿ ವಿರಮಿಸಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಯಮದೂತನಂತೆ ಬಂದ ಟಿಪ್ಪರ್ ಗಾಡಿಯವ, ಬಂಕ್ ನಲ್ಲಿ ಡಿಸೇಲ್ ಹಾಕಿಸಿಕೊಂಡು ಉಡುಪಿಯತ್ತ ತೆರಳುವಾಗ, ಬಂಕ್ ಪಕ್ಕದಲ್ಲಿ ಮಲಗಿದ್ದ ಲಾರಿ ಕಾರ್ಮಿಕನ ಮೇಲೆ ಟಿಪ್ಪರ್ ಚಲಾಯಿಸಿದ್ದಾನೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ಸೋಮೆಶ್ವರದ ಪೆಟ್ರೋಲ್ ಬಂಕ್ ( petrol bunk) ನಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಕಾರ್ಮಿಕ ಶಿವರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಿಸಿ ಕ್ಯಾಮೆರಾ (CCTV) ದೃಶ್ಯ ಭಯ ಹುಟ್ಟಿಸುವಂತಿದೆ.