ಕಾವೇರಿ ನೀರು ಹಂಚಿಕೆ ವಿಚಾರವಾಗಿ ಎದುರಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸಕಲ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್ ಮಾಡಲಾಗಿದೆ. ಕನ್ನಡ ಚಿತ್ರರಂಗ ಕೂಡ ಈ ಬಂದ್ಗೆ ಬೆಂಬಲ ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಸೇರಿ ಅನೇಕ ಸೆಲೆಬ್ರಿಟಿಗಳು ಈ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ ಉಪೇಂದ್ರ ಮಾತನಾಡಿದ್ದಾರೆ. ‘ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಸುಮಾರು 20ರಿಂದ 25 ಬಾರಿ ಈ ಹೋರಾಟ ಮಾಡಿದ್ದೇನೆ. ಆದರೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಪರಿಹಾರವೇ ಆಗದ ಸಮಸ್ಯೆ ಎಂದರೆ ಅದು ಇದೇ ಇರಬೇಕು. ನಾವೆಲ್ಲರೂ ವಿಚಾರವಂತರಾಗಬೇಕು. ಸ್ವಲ್ಪ ವಿಚಾರ ಮಾಡಿದರೆ ಇದರ ಹಿಂದಿನ ರಹಸ್ಯ ಏನು ಎಂಬುದು ಗೊತ್ತಾಗುತ್ತದೆ. ದೇವರು ಎಲ್ಲರಿಗೂ ವೈಚಾರಿಕತೆ ಕೊಡಲಿ. ಬುದ್ಧಿವಂತರಾಗೋಣ. ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳೋಣ’ ಎಂದು ಉಪೇಂದ್ರ ಹೇಳಿದ್ದಾರೆ.