ಮೊದಲ ವಾರವೇ ಶ್ನೇಕ್ ಶ್ಯಾಮ್ ಅವರು ಎಲಿಮಿನೇಟ್ ಆದ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಟ ಚುರುಕಾಗಿದೆ. ಎರಡನೇ ವಾರದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗಿದೆ. ಮೊದಲೆಲ್ಲ ಕನ್ಫೆಷನ್ ರೂಮ್ನಲ್ಲಿ ಯಾರಿಗೂ ತಿಳಿಯದಂತೆ ನಾಮಿನೇಟ್ ಮಾಡುವ ಅವಕಾಶ ಇರುತ್ತಿತ್ತು. ಆದರೆ ಈ ಸೀಸನ್ ಆರಂಭದಲ್ಲಿ ನೇರಾನೇರವಾಗಿ ನಾಮಿನೇಟ್ ಮಾಡಲು ಬಿಗ್ ಬಾಸ್ ಸೂಚಿಸಿದ್ದಾರೆ. ಸೋಮವಾರ (ಅಕ್ಟೋಬರ್ 16) ಬೆಳಗ್ಗೆ ಸ್ಪರ್ಧಿಗಳು ಕಣ್ಣು ಬಿಡುವುದಕ್ಕೂ ಮುನ್ನವೇ ನಾಮಿನೇಟ್ ಆದೇಶ ಬಂದಿದೆ. ಅನಿವಾರ್ಯವಾಗಿ ಎಲ್ಲರೂ ಒಬ್ಬೊಬ್ಬರ ಹೆಸರು ಸೂಚಿಸಲೇಬೇಕಾದ ಸಂದರ್ಭ ಎದುರಾಗಿದೆ. ಇದರಿಂದಾಗಿ ದೊಡ್ಮನೆಯ ಸದಸ್ಯರ ನಡುವೆ ಕಿತ್ತಾಟ ಶುರುವಾಗಿದೆ. ಒಬ್ಬರು ಇನ್ನೊಬ್ಬರ ಕಡೆಗೆ ಕೈ ತೋರಿಸಿ ಜಗಳ ಮಾಡಿದ್ದಾರೆ. ಒಟ್ಟಿನಲ್ಲಿ ಎರಡನೇ ವಾರದ ಆರಂಭದಲ್ಲೇ ಮನಸ್ತಾಪಕ್ಕೆ ದಾರಿಮಾಡಿಕೊಟ್ಟಂತೆ ಆಗಿದೆ. ‘ಬಿಗ್ ಬಾಸ್’ ಕಾರ್ಯಕ್ರಮ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಮೂಲಕ ದಿನದ 24 ಗಂಟೆಯೂ ಈ ಕಾರ್ಯಕ್ರಮವನ್ನು ಉಚಿತವಾಗಿ ನೋಡಲು ಅವಕಾಶ ಇದೆ.