ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾಗಿ ಎರಡು ದಿನ ಕಳೆದಿದೆ. ಬ್ಯಾಂಕಾಕ್ನಲ್ಲಿ ಆಗಸ್ಟ್ 6ರಂದು ಅವರು ಕೊನೆಯುಸಿರು ಎಳೆದರು. ಇಂದು (ಆಗಸ್ಟ್ 8) ಮೃತದೇಹವನ್ನು ಭಾರತಕ್ಕೆ ತರಲಾಗುತ್ತಿದೆ. ಅವರ ತಂದೆ ಬಿ.ಕೆ. ಶಿವರಾಂ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಕುಟುಂಬದವರ ಜೊತೆ ವಿದೇಶಕ್ಕೆ ತೆರಳಿದ್ದ ಸ್ಪಂದನಾ ವಿಜಯ್ ರಾಘವೇಂದ್ರ ಅವರು ಅಲ್ಲಿಯೇ ಹೃದಯಾಘಾತದಿಂದ ಮೃತರಾದರು. ವಿದೇಶದಲ್ಲಿ ನಿಧನರಾದ್ದರಿಂದ ಅಲ್ಲಿನ ಹಲವು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ ಮೃತದೇಹವನ್ನು ಭಾರತಕ್ಕೆ ಶಿಫ್ಟ್ ಮಾಡಲಾಗುವುದು. ಅಂತಿಮ ದರ್ಶನ ಪಡೆಯಲು ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಾದಿದ್ದಾರೆ. ಆಗಸ್ಟ್ 9ರಂದು ಅಂತ್ಯಕ್ರಿಯೆ ನಡೆಯಲಿದೆ.