ಸೋಮಣ್ಣಗೆ ಮುಳುಗುನೀರು ತಂದಿಟ್ಟಿದ್ದ ರುದ್ರೇಶ್ ದಿಢೀರ್ ಎಂಟ್ರಿ

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಬಿಜೆಪಿ ಮೈ ಕೊಡವಿ ನಿಂತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವ ಆತುರದಲ್ಲಿದೆ. ಅದರ ಬೆನ್ನಲ್ಲೇ ಗಡಿನಾಡು ಚಾಮರಾಜನಗರದಲ್ಲಿ ಮತ್ತೆ ಬಿವೈ ವಿಜಯೇಂದ್ರ ಆಪ್ತ ರೀ ಎಂಟ್ರಿ ಕೊಟ್ಟಿದ್ದು ರಾಜಕೀಯ ಪಡಸಾಲೆಯಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ವಿರೋಧಿ ಅಲೆ, 40 ಪರ್ಸೆಂಟ್ ಕಮಿಷನ್ ಆರೋಪದಿಂದ ಬಸವಳಿದ ಬಿಜೆಪಿ ಹೀನಾಯ ಸೋಲನ್ನ ಕಂಡಿತ್ತು. ಕೈ ನಾಯಕರ ಫ್ರೀ ಗ್ಯಾರಂಟಿಯ ಯೋಜನೆಯ ಸುನಾಮಿಗೆ ಜೆಡಿಎಸ್ ಹಾಗೂ ಬಿಜೆಪಿ ಕಂಡು ಕೇಳರಿಯದ ಸೋಲನ್ನ ಕಂಡಿತ್ತು. ಬಿಜೆಪಿಯ ಹಿರಿಯ ಮುತ್ಸದ್ಧಿ ವಿ.ಸೋಮಣ್ಣ ತಮ್ಮ ತವರು ಕ್ಷೇತ್ರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನ ತೊರೆದಿದ್ದರು.