ನಟ ಪುನೀತ್ ರಾಜ್ಕುಮಾರ್ ಅವರು ಭೌತಿಕವಾಗಿಲ್ಲ ಇಲ್ಲವಾಗಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷ ಕಳೆದಿದೆ. ಅಭಿಮಾನಿಗಳ ಹೃದಯದಲ್ಲಿ ಅವರಿಗೆ ಶಾಶ್ವತವಾದ ಸ್ಥಾನ ಸಿಕ್ಕಿದೆ. 2ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅಪ್ಪು ಸ್ಮಾರಕವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಬೆಳ್ಳಂಬೆಳಗ್ಗೆಯೇ ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿ ಬಳಿ ಜಮಾಯಿಸಿದ್ದಾರೆ. ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ನಮಿಸುತ್ತಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರಿಂದ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇಷ್ಟದ ತಿನಿಸುಗಳನ್ನು ಮಾಡಿ ಸ್ಮಾರಕದ ಮುಂದೆ ಇರಿಸಲಾಗುತ್ತಿದೆ. ದೂರದ ಊರುಗಳಿಂದ ಬಂದ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ನಮನ ಸಲ್ಲಿಸುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಪುನೀತ್ ರಾಜ್ಕುಮಾರ್ ಅವರ ಸಿನಿಮಾ ಮತ್ತು ಸಾಮಾಜಿಕ ಕೆಲಸಗಳನ್ನು ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ.