ಎಲ್ಲರೂ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಉಳಿಯೋಕೆ ಬಯಸುತ್ತಾರೆ. 100 ದಿನವೂ ಪೈಪೋಟಿ ನೀಡಿ, ಫಿನಾಲೆಗೆ ತಲುಪಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವು ಸ್ಪರ್ಧಿಗಳು ಕಾರಣಾಂತಗಳಿಂದ ಮಧ್ಯದಲ್ಲೇ ಆಟಕ್ಕೆ ಅಂತ್ಯ ಹಾಡಲು ನಿರ್ಧರಿಸುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ವರ್ತೂರು ಸಂತೋಷ್ ಅವರು ಆ ನಿರ್ಧಾರಕ್ಕೆ ಬಂದಿದ್ದಾರೆ. ‘ನನ್ನನ್ನು ಹೊರಗೆ ಕಳಿಸಿ’ ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಆದರೆ ಬಿಗ್ ಬಾಸ್ ಇದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಿಲ್ಲ. ದೊಡ್ಮನೆಯಲ್ಲಿ ವರ್ತೂರು ಸಂತೋಷ್ ಅವರಿಗೆ ಪ್ರತಿ ಕ್ಷಣವೂ ಕಷ್ಟ ಆಗುತ್ತಿದೆ. ಹಾಗಾಗಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಎಲ್ಲರೂ ಪ್ರಯತ್ನಿಸಿದ್ದಾರೆ. ಜನರಿಂದ 34 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿರುವ ವರ್ತೂರು ಸಂತೋಷ್ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಲು ತೀರ್ಮಾನಿಸಿರುವುದು ಅನೇಕರಿಗೆ ಬೇಸರ ಮೂಡಿಸಿದೆ. ಪ್ರತಿ ದಿನದ ಸಂಚಿಕೆಗಳು ‘ಕಲರ್ಸ್ ಕನ್ನಡ’ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತವಾಗಿ ನೋಡಬಹುದು.