ಶಾಸಕ ಪ್ರದೀಪ್ ಈಶ್ವರ್ ಅವರು ಏನೇ ಮಾಡಿದರೂ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಹಾಗೆಯೇ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು ಕೂಡ ಸಖತ್ ಚರ್ಚೆ ಹುಟ್ಟು ಹಾಕಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋಗೆ ಅವರು ಸ್ಪರ್ಧಿಯಾಗಿ ತೆರಳಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಅದು ನಿಜವಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆಗಿರುವ ಪ್ರದೀಪ್ ಈಶ್ವರ್ ಅವರು ಬೇರೆಯದೇ ಉದ್ದೇಶ ಇಟ್ಟುಕೊಂಡು ದೊಡ್ಮನೆಗೆ ತೆರಳಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ. ‘ಬಿಗ್ ಬಾಸ್ ಎಂಬುದು ಒಂದು ದೊಡ್ಡ ವೇದಿಕೆ. ಕೇವಲ ಮೂರು ಗಂಟೆ ಮಾತ್ರ ನಾನು ಬರುತ್ತೇನೆ ಅಂತ ಅವರಿಗೆ ಹೇಳಿದ್ದೆ. ಕರುನಾಡಿನ ಯುವ ಜನರನ್ನು ಮೋಟಿವೇಟ್ ಮಾಡಲು ನಾನು ಅಲ್ಲಿಗೆ ತೆರಳಿದ್ದೆ. ಚಿಕ್ಕ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡ ನಾನು ತಂದೆ-ತಾಯಿಯ ಮಹತ್ವವನ್ನು ತಿಳಿಸಿ ಹೇಳಲು ಬಿಗ್ ಬಾಸ್ಗೆ ಹೋದೆ’ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.