ಕೆಜಿಎಫ್: ಚಿನ್ನದ ಸಾಧನೆ ಮಾಡಿದ ಸ್ನೂಕರ್ ಯುವತಿ

ಚಿನ್ನದ‌ನಾಡಿನ‌ ಯುವಕರಿಗೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಬಿಡದ ಛಲವಿದೆ. ಹಾಗಾಗಿಯೇ ಈ ಯುವತಿ ಸ್ನೂಕರ್ ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾ ಸಾಗಿದ್ದಾಳೆ. ಅಂಡರ್ 16 ಶ್ರೇಣಿಯಲ್ಲಿ ಬೆಳ್ಳಿ, ಅಂಡರ್ 18 ರಲ್ಲಿ ಕಂಚು, ಇದೀಗ ಅಂಡರ್ 21 ನಲ್ಲಿ ವಿಶ್ವ ಸ್ನೂಕರ್ ಚಾಂಪಿಯನ್. ಹೌದು ಸ್ನೂಕರ್ ಬೋರ್ಡ್ ಕ್ಯೂ ಹಿಡಿದು ಮುಂದೆ ಗುರಿ ಇಟ್ಟು ಸ್ನೂಕ್ ಮಾಡುತ್ತಿರುವ ಇವರ ಹೆಸರು ಕೀರ್ತನಾ ಪಾಂಡಿಯನ್. ಕೋಲಾರದ ಕೆಜಿಎಫ್ ನ ಬೆಮೆಲ್‌ ನಗರದ ನಿವಾಸಿಗಳಾದ ಪಾಂಡಿಯನ್-ಜಯಲಕ್ಷ್ಮಿ ಪುತ್ರಿ. ಕೆಜಿಎಫ್ ನಗರದ ಜೈನ್ಸ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ.